ಬೆಂಗಳೂರು: ಕೃಷಿ ಇಲಾಖೆಯಲ್ಲಿ ಬಹುಕಾಲದಿಂದ ಖಾಲಿ ಉಳಿದಿದ್ದ ಹುದ್ದೆಗಳ ಭರ್ತಿಗೆ ಸರ್ಕಾರ ದೊಡ್ಡ ನಿರ್ಧಾರ ಕೈಗೊಂಡಿದೆ. ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ವಿಧಾನಸಭೆಯಲ್ಲಿ ಮಾತನಾಡಿ, ಗ್ರೂಪ್ ‘ಬಿ’ ಮತ್ತು ‘ಸಿ’ ವೃಂದದ 945 ಹುದ್ದೆಗಳನ್ನು ಮೂರು ತಿಂಗಳೊಳಗೆ ಭರ್ತಿ ಮಾಡುವುದಾಗಿ ಘೋಷಿಸಿದ್ದಾರೆ.
ಈ ಹುದ್ದೆಗಳಲ್ಲಿಗೆ ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳು ಸೇರಿವೆ. ಈಗಾಗಲೇ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ಒಳ ಮೀಸಲಾತಿ ವಿಚಾರದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿತ್ತು. ಆದರೆ ಇದೀಗ ಹೊಸ ಅಧಿಸೂಚನೆ ಹೊರಡಿಸಲು ಸರ್ಕಾರ ಕ್ರಮ ಕೈಗೊಂಡಿದ್ದು, ಶೀಘ್ರದಲ್ಲೇ ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ.
ಸಚಿವರು ಮಾಹಿತಿ ನೀಡಿದಂತೆ, ಕೃಷಿ ಇಲಾಖೆಯಲ್ಲಿ ಕೊನೆಯ ನೇಮಕಾತಿ 2018ರಲ್ಲಿ ನಡೆದಿದ್ದು, ಸುಮಾರು 370 ಹುದ್ದೆಗಳು ಭರ್ತಿಯಾಗಿದ್ದವು. ನಂತರ ಹಲವು ವರ್ಷಗಳಿಂದ ಯಾವುದೇ ನೇಮಕಾತಿ ನಡೆದಿರಲಿಲ್ಲ. ಇದರಿಂದಾಗಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಉಂಟಾಗಿದೆ.
ಪ್ರಸ್ತುತ, ಇಲಾಖೆಯಲ್ಲಿ ನಿಯಮಿತ ಸಿಬ್ಬಂದಿಯೊಂದಿಗೆ ಸುಮಾರು 2,000ಕ್ಕೂ ಹೆಚ್ಚು ಹೊರಗುತ್ತಿಗೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ರೈತರಿಗೆ ಉತ್ತಮ ಸೇವೆ ನೀಡಲು ಖಾಲಿ ಹುದ್ದೆಗಳ ಭರ್ತಿ ಅಗತ್ಯವಿದೆ ಎಂದು ಸಚಿವರು ಹೇಳಿದ್ದಾರೆ.
ಇನ್ನು ಸರ್ಕಾರದ ಹೊಸ ಯೋಜನೆಯಂತೆ, ಕೆಪಿಎಸ್ಸಿ ಮೂಲಕ ನೇರ ನೇಮಕಾತಿ ನಡೆಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರತಿ ಐದು ವರ್ಷಗಳಿಗೊಮ್ಮೆ ನೇಮಕಾತಿ ನಡೆಸಿದರೆ ಸಿಬ್ಬಂದಿ ಕೊರತೆ ಸಮಸ್ಯೆ ನಿವಾರಣೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ