ನವದೆಹಲಿದಲ್ಲಿ ನಡೆದ ರೋಚಕ ಪಂದ್ಯದಲ್ಲಿ Delhi Capitals ತಂಡವು Rajasthan Royals ವಿರುದ್ಧ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಮಿಚೆಲ್ ಸ್ಟಾರ್ಕ್ ಅವರ ಘಾತಕ ಬೌಲಿಂಗ್ ಹಾಗೂ ಕೊನೆಯಲ್ಲಿ ನಾಯಕ ಅಕ್ಷರ್ ಪಟೇಲ್ ಮತ್ತು ಅಶುತೋಷ್ ಶರ್ಮಾ ಅವರ ಸ್ಫೋಟಕ ಬ್ಯಾಟಿಂಗ್ ಡೆಲ್ಲಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿತು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್ 8 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 19.2 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 197 ರನ್ ಹೊಡೆದು ಗೆಲುವು ಸಾಧಿಸಿತು.
ಕೊನೆಯ 24 ಎಸೆತಗಳಲ್ಲಿ ಡೆಲ್ಲಿಗೆ 43 ರನ್ ಅಗತ್ಯವಿತ್ತು. 17ನೇ ಓವರ್ನಲ್ಲಿ ಸ್ಟಬ್ಸ್ ವಿಕೆಟ್ ಕಳೆದುಕೊಂಡರೂ ತಂಡ 8 ರನ್ ಗಳಿಸಿತು. ನಂತರ 18ನೇ ಓವರ್ನಲ್ಲಿ ಫೆರೀರಾ ಬೌಲಿಂಗ್ನಲ್ಲಿ 18 ರನ್ ಹರಿದುಬಂದವು. 19ನೇ ಓವರ್ನ ಮೊದಲ ಎಸೆತದಲ್ಲೇ ಡೇವಿಡ್ ಮಿಲ್ಲರ್ ಔಟಾದರೂ ಡೆಲ್ಲಿ 12 ರನ್ ಕಲೆಹಾಕಿತು.
ಕೊನೆಯ ಓವರ್ನಲ್ಲಿ ಅಶುತೋಷ್ ಶರ್ಮಾ ಸಿಡಿಲಬ್ಬರ ತೋರಿಸಿದರು. ಮೊದಲ ಎರಡು ಎಸೆತಗಳಲ್ಲಿ ಬೌಂಡರಿ ಮತ್ತು ಸಿಕ್ಸರ್ ಸಿಡಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು. ಅಶುತೋಷ್ ಶರ್ಮಾ 5 ಎಸೆತಗಳಲ್ಲಿ 18 ರನ್ ಗಳಿಸಿ ಅಜೇಯರಾಗಿದ್ದರೆ, ನಾಯಕ ಅಕ್ಷರ್ ಪಟೇಲ್ 18 ಎಸೆತಗಳಲ್ಲಿ 34 ರನ್ ಬಾರಿಸಿ ಮಿಂಚಿದರು.
ಇದಕ್ಕೂ ಮೊದಲು ಅಭಿಷೇಕ್ ಪೊರೆಲ್ ಮತ್ತು ಕೆಎಲ್ ರಾಹುಲ್ ಮೊದಲ ವಿಕೆಟ್ಗೆ 105 ರನ್ಗಳ ಭರ್ಜರಿ ಜೊತೆಯಾಟ ಕಟ್ಟಿದರು. ಅಭಿಷೇಕ್ ಪೊರೆಲ್ 31 ಎಸೆತಗಳಲ್ಲಿ 51 ರನ್ ಗಳಿಸಿದರೆ, ಕೆಎಲ್ ರಾಹುಲ್ 42 ಎಸೆತಗಳಲ್ಲಿ 56 ರನ್ ಸಿಡಿಸಿದರು.
ರಾಜಸ್ಥಾನ ಪರ ವೈಭವ್ ಸೂರ್ಯವಂಶಿ 21 ಎಸೆತಗಳಲ್ಲಿ 46 ರನ್ ಗಳಿಸಿದರೆ, ಧ್ರುವ್ ಜುರೇಲ್ 53 ಮತ್ತು ನಾಯಕ ರಿಯಾನ್ ಪರಾಗ್ 51 ರನ್ ಗಳಿಸಿ ತಂಡಕ್ಕೆ ದೊಡ್ಡ ಮೊತ್ತ ಕಟ್ಟಿಕೊಟ್ಟರು.
ಬೌಲಿಂಗ್ನಲ್ಲಿ ಮಿಚೆಲ್ ಸ್ಟಾರ್ಕ್ 4 ವಿಕೆಟ್ ಪಡೆದು ಮಿಂಚಿದರು. ಲುಂಗಿ ಎನ್ಗಿಡಿ ಮತ್ತು ಮಾಧವ್ ತಿವಾರಿ ತಲಾ 2 ವಿಕೆಟ್ ಪಡೆದರು. ವಿಶೇಷವಾಗಿ 15ನೇ ಓವರ್ನಲ್ಲಿ ಸ್ಟಾರ್ಕ್ ರಿಯಾನ್ ಪರಾಗ್, ಫೆರೀರಾ ಮತ್ತು ರವಿ ಸಿಂಗ್ ವಿಕೆಟ್ ಪಡೆದು ಪಂದ್ಯದ ದಿಕ್ಕೇ ಬದಲಿಸಿದರು.