ನವದೆಹಲಿ, ಮೇ 18: ಕೃತಕ ಬುದ್ಧಿಮತ್ತೆ (AI) ಭವಿಷ್ಯದಲ್ಲಿ ಲಕ್ಷಾಂತರ ಉದ್ಯೋಗಗಳಿಗೆ ಅಪಾಯ ತರುವ ಸಾಧ್ಯತೆ ಇದೆ ಎಂಬ ಚರ್ಚೆ ವಿಶ್ವದಾದ್ಯಂತ ನಡೆಯುತ್ತಿದೆ. ಈ ವಿಚಾರಕ್ಕೆ ಇದೀಗ ಮೈಕ್ರೋಸಾಫ್ಟ್ ಎಐ ವಿಭಾಗದ ಮುಖ್ಯಸ್ಥ ಮುಸ್ತಾಫ ಸುಲೇಮಾನ್ ಮತ್ತೊಮ್ಮೆ ಬಲ ತುಂಬಿದ್ದಾರೆ. ಅವರ ಪ್ರಕಾರ, ಮುಂದಿನ 12 ರಿಂದ 18 ತಿಂಗಳೊಳಗೆ ಅನೇಕ ವೈಟ್ ಕಾಲರ್ ಉದ್ಯೋಗಗಳು ಭಾರೀ ಬದಲಾವಣೆಯನ್ನು ಎದುರಿಸಲಿವೆ.
ಅಕೌಂಟೆಂಟ್, ಲಾಯರ್, ಕಾರ್ಪೊರೇಟ್ ಮ್ಯಾನೇಜ್ಮೆಂಟ್, ಮಾರ್ಕೆಟಿಂಗ್, ಫೈನಾನ್ಸ್ ಹಾಗೂ ಐಟಿ ಕ್ಷೇತ್ರದ ಹಲವು ಉದ್ಯೋಗಗಳನ್ನು AI ಕ್ರಮೇಣ ಬದಲಾಯಿಸಬಹುದು ಎಂದು ಅವರು ಎಚ್ಚರಿಸಿದ್ದಾರೆ. 2027ರ ವೇಳೆಗೆ ಮನುಷ್ಯರು ನಿರ್ವಹಿಸುತ್ತಿರುವ ಅನೇಕ ಕಚೇರಿ ಆಧಾರಿತ ಕಾರ್ಯಗಳನ್ನು ಎಐ ವ್ಯವಸ್ಥೆಗಳೇ ನಿರ್ವಹಿಸುವ ಮಟ್ಟಕ್ಕೆ ತಲುಪಲಿವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವೈಟ್ ಕಾಲರ್ ಜಾಬ್ ಎಂದರೇನು?
ಕಚೇರಿ, ಕಾರ್ಪೊರೇಟ್ ಹಾಗೂ ಆಡಳಿತಾತ್ಮಕ ಕೆಲಸಗಳನ್ನು ಸಾಮಾನ್ಯವಾಗಿ ವೈಟ್ ಕಾಲರ್ ಉದ್ಯೋಗಗಳು ಎಂದು ಕರೆಯಲಾಗುತ್ತದೆ. ಐಟಿ, ಅಕೌಂಟಿಂಗ್, ಫೈನಾನ್ಸ್, ಲೀಗಲ್ ಅಡ್ವೈಸರ್, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಸೇರಿದಂತೆ ಹಲವು ವೃತ್ತಿಪರ ಕ್ಷೇತ್ರಗಳು ಇದರಲ್ಲಿ ಸೇರಿವೆ.
ಇದಕ್ಕೆ ವಿರುದ್ಧವಾಗಿ, ಪ್ಲಂಬರ್, ಎಲೆಕ್ಟ್ರಿಷಿಯನ್, ಕಟ್ಟಡ ಕಾರ್ಮಿಕರು ಹಾಗೂ ಕೈಚಳಕ ಮತ್ತು ದೈಹಿಕ ಶ್ರಮ ಅವಶ್ಯಕವಾಗಿರುವ ಉದ್ಯೋಗಗಳನ್ನು ಬ್ಲೂ ಕಾಲರ್ ಕೆಲಸಗಳು ಎಂದು ಕರೆಯಲಾಗುತ್ತದೆ. ತಜ್ಞರ ಪ್ರಕಾರ, AI ಪರಿಣಾಮದಿಂದ ಹೆಚ್ಚು ಕಾಲ ಸುರಕ್ಷಿತವಾಗಿರುವುದು ಇಂತಹ ಬ್ಲೂ ಕಾಲರ್ ಉದ್ಯೋಗಗಳೇ.
ಕಂಪನಿಗಳಲ್ಲಿ ಎಐ ಏಜೆಂಟ್‌ಗಳ ಯುಗ
ಮುಸ್ತಾಫ ಸುಲೇಮಾನ್ ಹೇಳುವಂತೆ, ಮುಂದಿನ ಕೆಲವು ವರ್ಷಗಳಲ್ಲಿ AI ಏಜೆಂಟ್‌ಗಳು ಕಂಪನಿಗಳ ವರ್ಕ್‌ಫ್ಲೋಗಳನ್ನು ಸಂಪೂರ್ಣ ನಿರ್ವಹಿಸುವ ಮಟ್ಟಕ್ಕೆ ಬೆಳೆಯಲಿವೆ. ಮನುಷ್ಯರ ಹಸ್ತಕ್ಷೇಪವಿಲ್ಲದೇ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಈ ವ್ಯವಸ್ಥೆಗಳು ಹೊಂದಿರಲಿವೆ.
ಸಾಮಾನ್ಯ ಜನರೂ AI ಸಿಸ್ಟಂ ನಿರ್ಮಿಸಬಹುದು
AI ತಂತ್ರಜ್ಞಾನವು ದಿನೇದಿನೇ ಎಲ್ಲರಿಗೂ ಸುಲಭವಾಗಿ ಲಭ್ಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಸಾಮಾನ್ಯ ಜನರೂ ಹೆಚ್ಚಿನ ತಾಂತ್ರಿಕ ಪರಿಣತಿ ಇಲ್ಲದೇ ತಮ್ಮದೇ AI ಸಿಸ್ಟಂಗಳನ್ನು ನಿರ್ಮಿಸುವಂತಾಗುತ್ತದೆ ಎಂದು ಸುಲೇಮಾನ್ ಹೇಳಿದ್ದಾರೆ.
ಒಂದು ಬ್ಲಾಗ್ ಬರೆಯುವಷ್ಟು ಸುಲಭವಾಗಿ AI ಮಾಡೆಲ್‌ಗಳನ್ನು ಸೃಷ್ಟಿಸಬಹುದಾದ ಕಾಲ ಬರುತ್ತಿದೆ. ಇದರಿಂದ ವ್ಯಕ್ತಿಗಳು ಮತ್ತು ಸಂಸ್ಥೆಗಳು ತಮ್ಮ ಅಗತ್ಯಕ್ಕೆ ತಕ್ಕಂತೆ AI ಟೂಲ್ಗಳನ್ನು ತಾವೇ ರೂಪಿಸಿಕೊಳ್ಳುವ ಸಾಧ್ಯತೆ ಹೆಚ್ಚಲಿದೆ ಎಂದು ಅವರು ತಿಳಿಸಿದ್ದಾರೆ.