IPL 2026 ಆರಂಭಕ್ಕೂ ಮುನ್ನವೇ ಕೆಲವು ಪ್ರಮುಖ ತಂಡಗಳಿಗೆ ಭಾರೀ ಆಘಾತ ಎದುರಾಗಿದೆ. ಸ್ಟಾರ್ ಆಟಗಾರರ ಗಾಯದ ಸಮಸ್ಯೆ ಇದೀಗ ಫ್ರಾಂಚೈಸಿಗಳಿಗೆ ದೊಡ್ಡ ತಲೆನೋವಾಗಿದ್ದು, ಚಾಂಪಿಯನ್ ಕನಸುಗಳಿಗೆ ಅಡ್ಡಿಯಾಗುವ ಭೀತಿ ಎದುರಾಗಿದೆ.
ಈ ಬಾರಿ ವಿಶೇಷವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್‌ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ತಮ್ಮ ಪ್ರಮುಖ ವೇಗದ ಬೌಲರ್‌ಗಳ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿವೆ.
ಐಪಿಎಲ್ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ಈ ಬೆಳವಣಿಗೆಗಳು ತಂಡಗಳ ತಯಾರಿಯನ್ನು ಹಿಂಜರಿಯುವಂತೆ ಮಾಡಿವೆ.
RCBಗೆ ಹೇಜಲ್‌ವುಡ್ ಅನುಮಾನ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಸ್ಟ್ರೇಲಿಯನ್ ವೇಗಿ ಜೋಶ್ ಹೇಜಲ್‌ವುಡ್ ಇನ್ನೂ ಗಾಯದಿಂದ ಚೇತರಿಸಿಕೊಳ್ಳಿಲ್ಲ. ಈ ಕಾರಣದಿಂದಾಗಿ ಅವರು ದೀರ್ಘಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ.
ಹಿಂದಿನ ಸೀಸನ್‌ನಲ್ಲಿ RCBಗೆ ಬೌಲಿಂಗ್ ವಿಭಾಗದಲ್ಲಿ ಬಲ ನೀಡಿದ್ದ ಹೇಜಲ್‌ವುಡ್ ಈ ಬಾರಿ ತಂಡದಲ್ಲಿ ಭಾಗವಹಿಸುವುದು ಇನ್ನೂ ಸ್ಪಷ್ಟವಾಗಿಲ್ಲ. ಅವರ ಅನುಪಸ್ಥಿತಿ ತಂಡಕ್ಕೆ ದೊಡ್ಡ ಹಿನ್ನಡೆಯಾಗಬಹುದು.
SRHಗೆ ನಾಯಕ ಕಮ್ಮಿನ್ಸ್ ಸಮಸ್ಯೆ
ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೂ ದೊಡ್ಡ ಆಘಾತ ಎದುರಾಗಿದೆ. ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಗಾಯದಿಂದ ಬಳಲುತ್ತಿದ್ದು, ಅವರು ಇನ್ನೂ ಕ್ರಿಕೆಟ್‌ಗೆ ಮರಳಿಲ್ಲ.
ಆಶಸ್ ಸರಣಿಯ ವೇಳೆ ಗಾಯಗೊಂಡಿದ್ದ ಕಮ್ಮಿನ್ಸ್ ಈಗ IPLನಲ್ಲಿ ಆಡಲಾರರು ಎಂಬ ಅನುಮಾನ ವ್ಯಕ್ತವಾಗಿದೆ. ಇದರಿಂದಾಗಿ SRH ತಂಡ ಇಶಾನ್ ಕಿಶನ್‌ಗೆ ನಾಯಕತ್ವ ನೀಡಿರುವುದು ಗಮನಾರ್ಹ.
KKRಗೆ ಡಬಲ್ ಶಾಕ್
ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೂ ಎರಡು ದೊಡ್ಡ ಹೊಡೆತಗಳು ಬಿದ್ದಿವೆ. ಹರ್ಷಿತ್ ರಾಣಾ ಮತ್ತು ಮಥಿಶಾ ಪತಿರಾನ ಗಾಯಗಳಿಂದಾಗಿ ಈ ಆವೃತ್ತಿಯಿಂದಲೇ ಹೊರಗುಳಿದಿದ್ದಾರೆ.
ಇದಲ್ಲದೆ ಮುಸ್ತಾಫಿಜುರ್ ರೆಹಮಾನ್ ಹೊರಗುಳಿದ ನಂತರ, ತಂಡ ಜಿಂಬಾಬ್ವೆಯ ವೇಗಿ ಬ್ಲೆಸ್ಸಿಂಗ್ ಮುಸರಬಾನಿಯನ್ನು ಬದಲಿಯಾಗಿ ಸೇರಿಸಿಕೊಂಡಿದೆ.
CSKಗೆ ನಾಥನ್ ಎಲಿಸ್ ಗೈರು
ಐದು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೂ ಗಾಯದ ಸಮಸ್ಯೆ ದೊಡ್ಡ ತಲೆನೋವಾಗಿದೆ. ಆಸ್ಟ್ರೇಲಿಯಾದ ವೇಗಿ ನಾಥನ್ ಎಲಿಸ್ ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದು, ಅವರು ಸಂಪೂರ್ಣ ಟೂರ್ನಿಯಿಂದ ಹೊರಗುಳಿಯುವ ಸಾಧ್ಯತೆ ಇದೆ.
ಇದು CSK ತಂಡದ ಬೌಲಿಂಗ್ ವಿಭಾಗಕ್ಕೆ ದೊಡ್ಡ ಹೊಡೆತವಾಗಲಿದೆ.