ಐಪಿಎಲ್ 2026ರ 61ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪಂಜಾಬ್ ಕಿಂಗ್ಸ್ (PBKS) ವಿರುದ್ಧ 23 ರನ್‌ಗಳ ಭರ್ಜರಿ ಗೆಲುವು ಸಾಧಿಸಿ ಪ್ಲೇಆಫ್‌ಗೆ ಅಧಿಕೃತವಾಗಿ ಎಂಟ್ರಿ ಪಡೆದುಕೊಂಡಿದೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಈ ಹೈವೋಲ್ಟೇಜ್ ಪಂದ್ಯದಲ್ಲಿ ಆರ್‌ಸಿಬಿ ಎಲ್ಲಾ ವಿಭಾಗಗಳಲ್ಲೂ ಮೇಲುಗೈ ಸಾಧಿಸಿತು.
ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 222 ರನ್‌ಗಳ ಬೃಹತ್ ಮೊತ್ತ ಪೇರಿಸಿತು.
ಆರ್‌ಸಿಬಿ ಪರ ವಿರಾಟ್ ಕೊಹ್ಲಿ ಮತ್ತೊಮ್ಮೆ ಕ್ಲಾಸ್ ಬ್ಯಾಟಿಂಗ್ ಪ್ರದರ್ಶಿಸಿ 31 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ದೇವದತ್ ಪಡಿಕ್ಕಲ್ 45 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದರೆ, ವೆಂಕಟೇಶ್ ಅಯ್ಯರ್ ಸ್ಫೋಟಕ ಆಟವಾಡಿ ಕೇವಲ 29 ಎಸೆತಗಳಲ್ಲಿ ಫಿಫ್ಟಿ ಸಿಡಿಸಿದರು. ಅಯ್ಯರ್ ಅಜೇಯ 73 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿದರು.
223 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್ ಆರಂಭದಲ್ಲೇ ಆಘಾತ ಅನುಭವಿಸಿತು. ಪ್ರಿಯಾಂಶ್ ಆರ್ಯ ಹಾಗೂ ಪ್ರಭ್ಸಿಮ್ರಾನ್ ಸಿಂಗ್ ಅವರನ್ನು ಭುವನೇಶ್ವರ್ ಕುಮಾರ್ ಬೇಗನೇ ಪೆವಿಲಿಯನ್‌ಗೆ ಕಳುಹಿಸಿದರು. ನಾಯಕ ಶ್ರೇಯಸ್ ಅಯ್ಯರ್ ಕೂಡ ಕೇವಲ 1 ರನ್‌ಗೆ ಔಟಾದರು.
ಮಧ್ಯಮ ಕ್ರಮಾಂಕದಲ್ಲಿ ಕೂಪರ್ ಕಾನೊಲಿ ಮತ್ತು ಸೂರ್ಯಾಂಶ್ ಶೆಡ್ಜ್ ಹೋರಾಟ ನಡೆಸಿದರೂ, ಆರ್‌ಸಿಬಿ ಬೌಲರ್‌ಗಳ ನಿಯಂತ್ರಿತ ದಾಳಿಗೆ ಪಂಜಾಬ್ ಬ್ಯಾಟರ್‌ಗಳು ಮಣಿದರು. ಬಳಿಕ ಮಾರ್ಕಸ್ ಸ್ಟೊಯಿನಿಸ್ ಹಾಗೂ ಶಶಾಂಕ್ ಸಿಂಗ್ ಸ್ಫೋಟಕ ಜೊತೆಯಾಟದ ಮೂಲಕ ಪಂದ್ಯದಲ್ಲಿ ರೋಚಕತೆ ಮೂಡಿಸಿದರು.
ಶಶಾಂಕ್ ಸಿಂಗ್ ಕೇವಲ 22 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಕೊನೆಯವರೆಗೂ ಹೋರಾಟ ನಡೆಸಿದರು. ಆದರೆ ಅಂತಿಮ ಓವರ್‌ಗಳಲ್ಲಿ ಜೋಶ್ ಹ್ಯಾಜಲ್‌ವುಡ್ ಹಾಗೂ ರಸಿಕ್ ಸಲಾಂ ಅದ್ಭುತ ಬೌಲಿಂಗ್ ನಡೆಸಿ ಪಂಜಾಬ್ ಗೆಲುವಿನ ಆಸೆಗೆ ಬ್ರೇಕ್ ಹಾಕಿದರು.
ನಿಗದಿತ 20 ಓವರ್‌ಗಳಲ್ಲಿ ಪಂಜಾಬ್ ಕಿಂಗ್ಸ್ 8 ವಿಕೆಟ್ ಕಳೆದುಕೊಂಡು 199 ರನ್‌ಗಳಿಗೆ ಸೀಮಿತವಾಯಿತು. ಇದರೊಂದಿಗೆ ಆರ್‌ಸಿಬಿ 23 ರನ್‌ಗಳ ಗೆಲುವು ದಾಖಲಿಸಿ ಪ್ಲೇಆಫ್ ಪ್ರವೇಶ ಖಚಿತಪಡಿಸಿಕೊಂಡಿತು.
ಇತ್ತ ಪಂಜಾಬ್ ಕಿಂಗ್ಸ್ ಸತತ ಆರನೇ ಸೋಲು ಅನುಭವಿಸಿದ್ದು, ತಂಡದ ಪ್ಲೇಆಫ್ ಕನಸು ಮತ್ತಷ್ಟು ಕಷ್ಟಕರವಾಗಿದೆ.