ದೇಶಾದ್ಯಂತ ಭಾರೀ ಸಂಚಲನ ಮೂಡಿಸಿರುವ 400 ಕೋಟಿ ರೂ. ದರೋಡೆ ಪ್ರಕರಣ ಇದೀಗ ಮತ್ತಷ್ಟು ತೀವ್ರ ಹಂತಕ್ಕೆ ಪ್ರವೇಶಿಸಿದೆ. ಮಹಾರಾಷ್ಟ್ರ ಸರ್ಕಾರ ರಚಿಸಿರುವ ವಿಶೇಷ ತನಿಖಾ ದಳ (SIT) ಪ್ರಕರಣದ ಎಲ್ಲಾ ಆಯಾಮಗಳನ್ನು ಆಳವಾಗಿ ಪರಿಶೀಲಿಸುತ್ತಿದ್ದು, ಹವಾಲಾ ಜಾಲಕ್ಕೆ ಸಂಬಂಧ ಹೊಂದಿರುವ ಶಂಕಿತ ಆರೋಪಿ ವಿರಾಟ್ ಗಾಂಧಿಯನ್ನು ಜನವರಿ 28ರ ವರೆಗೆ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದೆ. ತನಿಖೆ ಮುಂದುವರಿದಂತೆ, ಹಣದ ಮೂಲ, ಸಾಗಾಟದ ಮಾರ್ಗ ಹಾಗೂ ಇದರಲ್ಲಿ ಭಾಗಿಯಾಗಿರುವ ಪ್ರಭಾವಿ ವ್ಯಕ್ತಿಗಳ ಬಗ್ಗೆ ಹೊಸ ಹೊಸ ಮಾಹಿತಿಗಳು ಹೊರಬರುತ್ತಿವೆ.
ತನಿಖೆ ಚುರುಕು – ಸ್ಥಳ ಪರಿಶೀಲನೆ ಸಾಧ್ಯತೆ
ಎಸ್‌ಐಟಿ ಮುಖ್ಯಸ್ಥ ಹಾಗೂ ಎಎಸ್‌ಪಿ ಆದಿತ್ಯ ಮಿರ್ಖೆಲ್ಕರ್ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ದರೋಡೆಯಾಗಿದೆ ಎನ್ನಲಾದ ಹಣ ಯಾರಿಗೆ ಸೇರಿದ್ದು, ಅದನ್ನು ಎಲ್ಲಿಗೆ ಸಾಗಿಸಲಾಗುತ್ತಿತ್ತು ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ. ವಿರಾಟ್ ಗಾಂಧಿಯ ಹೇಳಿಕೆಗಳ ಆಧಾರದ ಮೇಲೆ, ದರೋಡೆಗೆ ಸಂಬಂಧಿಸಿದ ಪ್ರಮುಖ ಪ್ರದೇಶವೆಂದು ಶಂಕಿಸಲಾಗಿರುವ ಚೋರ್ಲಾ ಘಾಟ್‌ನಲ್ಲಿ ಸ್ಥಳ ಪರಿಶೀಲನೆ ನಡೆಸುವ ಸಾಧ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಣದ ಮೂಲ ಮತ್ತು ಪ್ರಭಾವಿಗಳ ಪಾತ್ರ
ತನಿಖೆಯ ಮತ್ತೊಂದು ಮಹತ್ವದ ಅಂಶವೆಂದರೆ, ದರೋಡೆಯಾದ ಹಣದ ಅಸಲಿಯತ್ತು. ತಾಂತ್ರಿಕ ಸಾಕ್ಷ್ಯಗಳ ಸಹಾಯದಿಂದ ಕಂಟೇನರ್ ಚಲನವಲನ, ಮೊಬೈಲ್ ಲೊಕೇಶನ್ ಡೇಟಾ ಹಾಗೂ ಕರೆ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಈ ಹಗರಣದಲ್ಲಿ ಪ್ರಭಾವಿ ರಾಜಕಾರಣಿಗಳು ಮತ್ತು ಉದ್ಯಮಿಗಳ ಪಾತ್ರ ಇರಬಹುದೆಂಬ ಅನುಮಾನಗಳು ತನಿಖಾಧಿಕಾರಿಗಳಲ್ಲಿ ಮೂಡಿವೆ. ದೂರುದಾರ ಸಂದೀಪ್ ಪಾಟೀಲ್ ಅವರ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿಯೂ ವಿರಾಟ್ ಗಾಂಧಿಯ ಪ್ರಮುಖ ಪಾತ್ರವಿದೆ ಎನ್ನಲಾಗುತ್ತಿದೆ.
ಇನ್ನೆರಡು ದಿನಗಳಲ್ಲಿ ಸ್ಪಷ್ಟ ಚಿತ್ರ?
ವಿರಾಟ್ ಗಾಂಧಿ ನಾಸಿಕ್ ಮೂಲದ ಬಿಲ್ಡರ್ ಕಿಶೋರ್ ಸಾಳ್ವೆಯ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದ್ದು, ಈ ದರೋಡೆ ಸಂಚಿನ ಪ್ರಮುಖ ಕೊಂಡಿ ಎಂದು ಪೊಲೀಸರು ಶಂಕಿಸಿದ್ದಾರೆ. ದರೋಡೆಯಾದ ಹಣ ಗುಜರಾತ್‌ನ ಪ್ರಭಾವಿ ರಾಜಕಾರಣಿಯೊಬ್ಬರಿಗೆ ಸೇರಿದೆ ಎಂಬ ಅನುಮಾನಗಳೂ ತನಿಖೆಯಲ್ಲಿ ವ್ಯಕ್ತವಾಗುತ್ತಿವೆ. ಬಿಲ್ಡರ್ ಕಿಶೋರ್ ಸಾಳ್ವೆ ಹಣ ಸಾಗಾಟದ ಮಧ್ಯವರ್ತಿಯಾಗಿದ್ದಾನೆ ಎನ್ನಲಾಗುತ್ತಿದ್ದು, ಸದ್ಯ ಆತ ನಾಪತ್ತೆಯಾಗಿದ್ದಾನೆ. ಮುಂದಿನ ಇನ್ನೆರಡು ದಿನಗಳಲ್ಲಿ ಪ್ರಕರಣದ ಹಲವಾರು ಅಂಶಗಳ ಬಗ್ಗೆ ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ವೈರಲ್ ಆಡಿಯೋ – ಪ್ರಕರಣಕ್ಕೆ ತಿರುವು
ಈ ಪ್ರಕರಣದಲ್ಲಿ ದೊಡ್ಡ ತಿರುವು ತಂದಿರುವುದು ವಿರಾಟ್ ಗಾಂಧಿ ಮತ್ತು ಜಯೇಶ್ ಕದಂ ನಡುವಿನ ವಾಟ್ಸಾಪ್ ಆಡಿಯೋ ಸಂಭಾಷಣೆ. ಈ ಆಡಿಯೋದಲ್ಲಿ ಅಹಮದಾಬಾದ್‌ನ ಪ್ರಸಿದ್ಧ ಆಶ್ರಮವೊಂದರಲ್ಲಿ ನೋಟುಗಳನ್ನು ಬದಲಾವಣೆ ಮಾಡುವ ಜಾಲದ ಬಗ್ಗೆ ಚರ್ಚಿಸಿರುವುದು ಕೇಳಿಬರುತ್ತದೆ ಎನ್ನಲಾಗಿದೆ. ಉದ್ಯಮಿ ಕಿಶೋರ್ ಸಾಳ್ವೆ (ಸೇತ್) ಈ ಭಾರಿ ಮೊತ್ತದ ಹಣ ಸಾಗಾಟದ ಜವಾಬ್ದಾರಿಯನ್ನು ವಿರಾಟ್‌ಗೆ ನೀಡಿದ್ದಾನೆ ಎನ್ನುವ ಉಲ್ಲೇಖವೂ ಆಡಿಯೋದಲ್ಲಿದೆ. ಹಣವಿದ್ದ ಕಂಟೇನರ್ ಮತ್ತು ಅದನ್ನು ಸಾಗಿಸುತ್ತಿದ್ದ ತಂಡ ಏಕಾಏಕಿ ನಾಪತ್ತೆಯಾಗಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವುದೂ ಈ ಸಂಭಾಷಣೆಯಲ್ಲಿ ಕೇಳಿಬರುತ್ತದೆ.
ಈ ಆಡಿಯೋವನ್ನು ಈಗಾಗಲೇ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅದರ ಸತ್ಯಾಸತ್ಯತೆ ದೃಢಪಡಿಸುವ ಕೆಲಸ ನಡೆಯುತ್ತಿದೆ. ಆಡಿಯೋದಲ್ಲಿ ಉಲ್ಲೇಖಿಸಿರುವ ಅಹಮದಾಬಾದ್ ಆಶ್ರಮ ಹಾಗೂ ಗುಜರಾತ್‌ನ ವ್ಯಕ್ತಿಯ ಗುರುತು ಪತ್ತೆ ಹಚ್ಚಲು, ಮಹಾರಾಷ್ಟ್ರ ಪೊಲೀಸರು ಗುಜರಾತ್‌ಗೆ ವಿಶೇಷ ತಂಡ ಕಳುಹಿಸುವ ಸಾಧ್ಯತೆ ಇದೆ.
ಪ್ರಮುಖ ಆರೋಪಿಗಳು ಯಾರು?
ಈ ಪ್ರಕರಣದಲ್ಲಿ ಹಲವು ಆರೋಪಿಗಳನ್ನು ಬಂಧಿಸಲಾಗಿದೆ.
-
ವಿರಾಟ್ ಗಾಂಧಿ: ಗುಜರಾತ್/ರಾಜಸ್ಥಾನ ಮೂಲದ ಹವಾಲಾ ಆಪರೇಟರ್ ಎಂದು ಶಂಕೆ
-
ಜಯೇಶ್ ಕದಂ: ಮುಂಬಯಿ ಮೂಲದವನು, ಆಡಿಯೋ ಸಂಭಾಷಣೆಯಲ್ಲಿರುವ ಪ್ರಮುಖ ವ್ಯಕ್ತಿ
-
ವಿಶಾಲ್ ನಾಯ್ಡು: ದರೋಡೆ ಮತ್ತು ಅಪಹರಣ ಸಂಚಿನಲ್ಲಿ ಭಾಗ
-
ಸುನೀಲ ಧುಮಾಲ್: ಅಪಹರಣ ತಂಡದ ಸದಸ್ಯ
-
ಜನಾರ್ದನ್ ಧಾಯಗುಡೆ, ಸೈಯದ್ ಅಜರ್: ತಾಂತ್ರಿಕ ಸಾಕ್ಷ್ಯ ಆಧಾರದಲ್ಲಿ ಬಂಧನ
-
ಕಿಶೋರ್ ಸಾಳ್ವೆ: ನಾಸಿಕ್ ಮೂಲದ ಬಿಲ್ಡರ್, ಸದ್ಯ ನಾಪತ್ತೆ
ರಾಜಕೀಯ ಕೆಸರೆರಚಾಟ ತೀವ್ರ
ಪ್ರಕರಣ ರಾಜಕೀಯ ವಲಯಕ್ಕೂ ಬೆಂಕಿ ಹಚ್ಚಿದೆ. ಬಿಜೆಪಿ ನಾಯಕರು ಈ ಹಣ ಕಾಂಗ್ರೆಸ್‌ಗೆ ಸೇರಿದೆ ಎಂದು ಆರೋಪಿಸುತ್ತಿದ್ದರೆ, ಕಾಂಗ್ರೆಸ್ ನಾಯಕರು ಘಟನೆಯ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಸತೀಶ ಜಾರಕಿಹೊಳಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. “ಹಣ ಸಾಗಿದ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳೇ ಅಧಿಕಾರದಲ್ಲಿವೆ, ಇದಕ್ಕೆ ಉತ್ತರ ಕೊಡಬೇಕಾದವರು ಯಾರು?” ಎಂದು ಕಾಂಗ್ರೆಸ್ ನಾಯಕರು ಪ್ರಶ್ನಿಸಿದ್ದಾರೆ.
ಪ್ರಕರಣ ಯಾವ ದಿಕ್ಕು ತಗೊಳ್ಳಲಿದೆ?
400 ಕೋಟಿ ರೂ. ದರೋಡೆ ಪ್ರಕರಣವು ಕೇವಲ ಅಪರಾಧ ತನಿಖೆಯಷ್ಟೇ ಅಲ್ಲದೆ, ರಾಜಕೀಯ ಮತ್ತು ಆರ್ಥಿಕ ಅಂಶಗಳನ್ನು ಒಳಗೊಂಡ ದೊಡ್ಡ ಹಗರಣವಾಗಿ ಬೆಳೆಯುತ್ತಿದೆ. ಎಸ್‌ಐಟಿ ತನಿಖೆ ಮುಂದುವರಿದಂತೆ, ಇನ್ನಷ್ಟು ಪ್ರಭಾವಿ ಹೆಸರುಗಳು ಹೊರಬರುವ ಸಾಧ್ಯತೆ ಇದ್ದು, ಈ ಪ್ರಕರಣ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲೂ ದೊಡ್ಡ ಚರ್ಚೆಗೆ ಕಾರಣವಾಗುವ ಲಕ್ಷಣಗಳಿವೆ.