Telegram Join My Telegram WhatsApp Join My WhatsApp
https://forms.gle/q1ST6dTzZNVb7R7e6

NEET UG Exam Cancelled: ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ; ನೀಟ್ ಯುಜಿ ಪರೀಕ್ಷೆ ರದ್ದು

ನವದೆಹಲಿ: ದೇಶದಾದ್ಯಂತ ವೈದ್ಯಕೀಯ ಪ್ರವೇಶಕ್ಕಾಗಿ ನಡೆಸಲಾಗುವ ರಾಷ್ಟ್ರೀಯ ಅರ್ಹತಾ ಹಾಗೂ ಪ್ರವೇಶ ಪರೀಕ್ಷೆ (NEET UG) ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಮೇ 3ರಂದು ನಡೆದಿದ್ದ ನೀಟ್ ಯುಜಿ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ರದ್ದುಗೊಳಿಸಿರುವುದಾಗಿ ಘೋಷಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಆರೋಪ ಕೇಳಿಬಂದ ಹಿನ್ನೆಲೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

ಪರೀಕ್ಷೆಗೆ ಮುನ್ನವೇ ಪ್ರಶ್ನೆಗಳು ಹೊರಬಂದಿದ್ದವೆಂಬ ಆರೋಪ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ವಿಶೇಷವಾಗಿ ರಾಜಸ್ಥಾನದ ಸಿಕಾರ್ ಪ್ರದೇಶದಲ್ಲಿ ಮೇ 1ರಂದೇ ‘ಗಸ್ ಪೇಪರ್’ ಹೆಸರಿನಲ್ಲಿ ಕೆಲವು ಪ್ರಶ್ನೆಗಳು ಹರಿದಾಡಿದ್ದವು ಎನ್ನಲಾಗಿದೆ.

ವರದಿಗಳ ಪ್ರಕಾರ, ಈ ಊಹೆ ಪತ್ರಿಕೆಯಲ್ಲಿ ಇದ್ದ ಅನೇಕ ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರ ಪ್ರಶ್ನೆಗಳು ಅಸಲಿ ಪ್ರಶ್ನೆ ಪತ್ರಿಕೆಗೆ ಹೋಲಿಕೆಯಾಗಿದ್ದವು ಎಂಬ ಆರೋಪ ಕೇಳಿಬಂದಿದೆ. ಸುಮಾರು 100ಕ್ಕೂ ಹೆಚ್ಚು ಪ್ರಶ್ನೆಗಳು ನಿಜವಾದ ಪ್ರಶ್ನೆ ಪತ್ರಿಕೆಗೆ ಹೊಂದಿಕೆಯಾಗಿದ್ದವು ಎಂದು ಹೇಳಲಾಗುತ್ತಿದೆ.

ಈ ಬೆಳವಣಿಗೆ ಬಳಿಕ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ತುರ್ತು ಸಭೆ ನಡೆಸಿ ಪರೀಕ್ಷೆಯನ್ನು ರದ್ದುಗೊಳಿಸುವ ನಿರ್ಧಾರಕ್ಕೆ ಬಂದಿದೆ. ಜೊತೆಗೆ ಹೊಸ ಪರೀಕ್ಷಾ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ.

ಇದೇ ವೇಳೆ ರಾಜಸ್ಥಾನದ ವಿಶೇಷ ಕಾರ್ಯಾಚರಣೆ ತಂಡ (SOG) ಈ ಪ್ರಕರಣದ ಕುರಿತು ತನಿಖೆ ಆರಂಭಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಸಂಬಂಧಿತ ಮಾಹಿತಿಯನ್ನು ಎನ್‌ಟಿಎ ಕೇಂದ್ರ ತನಿಖಾ ಸಂಸ್ಥೆಗಳಿಗೆ ಹಸ್ತಾಂತರಿಸಿದೆ ಎಂದು ತಿಳಿದುಬಂದಿದೆ.

ನೀಟ್ ಪರೀಕ್ಷೆಯಲ್ಲಿ ಅವ್ಯವಹಾರ ಆರೋಪ ಇದೇ ಮೊದಲಲ್ಲ. 2024 ಹಾಗೂ 2025ರಲ್ಲಿಯೂ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ಕುರಿತು ಗಂಭೀರ ಆರೋಪಗಳು ಕೇಳಿಬಂದಿದ್ದವು. 2024ರ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಿ ಪಾಟ್ನಾ ಮತ್ತು ಹಜಾರಿಬಾಗ್ ಪ್ರದೇಶಗಳಲ್ಲಿ ಕೆಲ ಆರೋಪಿಗಳನ್ನು ಬಂಧಿಸಿತ್ತು.

ಈ ಬಾರಿ ಕೂಡ ಪರೀಕ್ಷೆ ರದ್ದಾಗಿರುವುದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಆತಂಕಕ್ಕೊಳಗಾಗಿದ್ದಾರೆ. ಹೊಸ ಪರೀಕ್ಷಾ ದಿನಾಂಕ ಮತ್ತು ಮುಂದಿನ ಕ್ರಮಗಳ ಕುರಿತು ಎನ್‌ಟಿಎ ಅಧಿಕೃತ ಪ್ರಕಟಣೆ ಹೊರಡಿಸುವ ನಿರೀಕ್ಷೆಯಿದೆ.

Leave a Comment