IPL 2026 ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ (RR) ತಂಡವು ಅದ್ಭುತ ಆರಂಭ ಪಡೆದಿದ್ದು, ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ 8 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಅರ್ಧಶತಕ ತಂಡದ ಗೆಲುವಿಗೆ ಮುಖ್ಯ ಕಾರಣವಾಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡವು ರಾಜಸ್ಥಾನ ಬೌಲರ್ಗಳ ಕಟ್ಟು ನಿಟ್ಟಿನ ದಾಳಿಗೆ ತುತ್ತಾಗಿ 19.4 ಓವರ್ಗಳಲ್ಲಿ 127 ರನ್ಗಳಿಗೆ ಆಲೌಟ್ ಆಯಿತು. ಆರಂಭದಲ್ಲೇ ವಿಕೆಟ್ಗಳು ಬೀಳುತ್ತಿದ್ದ ಕಾರಣ CSK 100 ರನ್ ದಾಟುವುದೇ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆದರೆ ಜೇಮೀ ಓವರ್ಟನ್ ಅವರು 36 ಎಸೆತಗಳಲ್ಲಿ 43 ರನ್ (2 ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡದ ಮೊತ್ತವನ್ನು 127 ರನ್ವರೆಗೆ ತೆಗೆದುಕೊಂಡು ಹೋದರು.
ರಾಜಸ್ಥಾನ ರಾಯಲ್ಸ್ ಪರ ಜೋಫ್ರಾ ಆರ್ಚರ್, ನಾಂಡ್ರೆ ಬರ್ಗರ್ ಹಾಗೂ ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದು ಮಿಂಚಿದರು. ಸಂದೀಪ್ ಶರ್ಮಾ, ರವಿ ಬಿಷ್ನೋಯ್ ಮತ್ತು ಬ್ರಿಜೇಶ್ ಶರ್ಮಾ ತಲಾ ಒಂದು ವಿಕೆಟ್ ಪಡೆದು ಉತ್ತಮ ಸಹಕಾರ ನೀಡಿದರು.
127 ರನ್ಗಳ ಸುಲಭ ಗುರಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ತಂಡವು ಕೇವಲ 12.1 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 128 ರನ್ ಗಳಿಸಿ ಸುಲಭ ಗೆಲುವು ಸಾಧಿಸಿತು.
ಈ ವೇಳೆ ವೈಭವ್ ಸೂರ್ಯವಂಶಿ ಅವರ ಸ್ಫೋಟಕ ಆಟ ಎಲ್ಲರ ಗಮನ ಸೆಳೆಯಿತು. ಮೊದಲ ಎಸೆತದಲ್ಲೇ ಬೌಂಡರಿ, ಎರಡನೇ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಅವರು ಅಬ್ಬರದ ಆಟಕ್ಕೆ ಚಾಲನೆ ನೀಡಿದರು. ಕೇವಲ 15 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಅವರು, ಅಂತಿಮವಾಗಿ 17 ಎಸೆತಗಳಲ್ಲಿ 52 ರನ್ (4 ಬೌಂಡರಿ, 5 ಸಿಕ್ಸರ್) ಗಳಿಸಿ ಔಟಾದರು.
ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಮೂರನೇ ವೇಗದ ಅರ್ಧಶತಕ ಸಿಡಿಸಿದ ಸಾಧನೆಗೂ ಸೂರ್ಯವಂಶಿ ಪಾತ್ರರಾದರು. ಅವರ ಈ ಆಟವೇ ಪಂದ್ಯವನ್ನು ಸಂಪೂರ್ಣವಾಗಿ RR ಪರ ತಿರುಗಿಸಿತು.